ನ್ಯೂಸ್: ಮೋದಿಯವರ ಗೆಲುವಿನ ಪ್ರಮುಖ ಬೀಗದ ಕೈ ಯಾವುದು ಗೊತ್ತಾ...???

ಆಯೋಧ್ಯೆಯ ರಾಮಮಂದಿರ- ಬಾಬರಿ ಮಸೀದಿ ವಿವಾದದ ಇತ್ಯರ್ಥ ತ್ವರಿತವಾಗಿ ಹೊರಬೀಳುವ ಸಾಧ್ಯತೆಯನ್ನು ಗುರುವಾರ ಹೊರಬಿದ್ದ ಸುಪ್ರೀಂ ಕೋರ್ಟ್ ತೀರ್ಪು ತೆರೆದಿದೆ. ಇದೇ ಅಕ್ಟೋಬರ್ ಅಂತ್ಯದಿಂದ ವಿವಾದದ ವಿಚಾರಣೆ ಆರಂಭ ಆಗಲಿದ್ದು 2019ರ ಲೋಕಸಭಾ ಚುನಾವಣೆಗೆ ಮುನ್ನ ಈ ತೀರ್ಪು ಪ್ರಕಟ ಆಗುವುದೆಂಬ ದಟ್ಟ ಆಶಾವಾದವನ್ನು ಬಿಜೆಪಿ-ಆರ್.ಎಸ್.ಎಸ್, ವಿಶ್ವಹಿಂದು ಪರಿಷತ್- ಬಜರಂಗದಳ ವ್ಯಕ್ತಪಡಿಸಿವೆ.
ದೇಶಾದ್ಯಂತ ಅಲ್ಲದೆ ಹೋದರೂ ಕನಿಷ್ಠ ಪಕ್ಷ ಉತ್ತರಪ್ರದೇಶದಲ್ಲಿ ಈ ಧೃವೀಕರಣ ಮೋದಿ-ಶಾ ಅವರ ಬಿಜೆಪಿಯ ಪಾಲಿಗೆ ಅತ್ಯಗತ್ಯ. 80 ಲೋಕಸಭಾ ಸೀಟುಗಳನ್ನು ಹೊಂದಿರುವ ಉತ್ತರಪ್ರದೇಶವನ್ನು ಗೆದ್ದವರು ದಿಲ್ಲಿಯ ಗದ್ದುಗೆ ಏರುತ್ತಾರೆ ಎಂಬುದು ಸವಕಲಾದರೂ ಸತ್ಯವಾದ ಮಾತು.

ಉತ್ತರಪ್ರದೇಶದಲ್ಲಿ ಬಿಜೆಪಿಯ ಘನ ವಿಜಯಗಳ ಮುಂದೆ ಶೋಚನೀಯವಾಗಿ ಸೋತಿದ್ದರೂ ಎಸ್.ಪಿ. ಮತ್ತು ಬಿ.ಎಸ್.ಪಿ. ತಳ್ಳಿ ಹಾಕುವಂತಹ ದುರ್ಬಲ ರಾಜಕೀಯ ಶಕ್ತಿಗಳಲ್ಲ.  2017ರ ವಿಧಾನಸಭೆಗಳಲ್ಲಿ ಕೂಡ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅನುಕ್ರಮವಾಗಿ ತಲಾ ಶೇ 22.23 ಮತ್ತು ಶೇ 28.32ರಷ್ಟು ಮತ ಗಳಿಸಿದ್ದಾರೆ. ಎರಡೂ ಸೇರಿದರೆ ಶೇ.50ರಷ್ಟು ಮತಗಳ ಗಡಿ ದಾಟುತ್ತದೆ ಎಂಬ ಅಂಶವನ್ನು ಗಮನಿಸಬೇಕು. ಭರ್ಜರಿಯಾಗಿ ಗೆದ್ದ ಬಿಜೆಪಿ ಗಳಿಸಿದ ಮತಗಳ ಪ್ರಮಾಣ ಶೇ 41.57.

ಮೋದಿ ಅಲೆಯು ಶಿಖರ ಮುಟ್ಟಿದ್ದ 2014ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ್ದ ಮತಗಳ ಪ್ರಮಾಣ ಶೇ 42.63. ಎಸ್.ಪಿ. (ಶೇ 22.35) ಮತ್ತು ಬಿ.ಎಸ್.ಪಿ.ಯ (ಶೇ 19.77) ಒಟ್ಟು ಮತ ಪ್ರಮಾಣ (ಶೇ 42.12). ಬಿಜೆಪಿ ಮತ್ತು ಅದರ ಎದುರಾಳಿಗಳ ನಡುವಣ ಅಂತರ ಕೂದಲೆಳೆಗಿಂತ ದೊಡ್ಡದಲ್ಲ.

2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಕ್ಷೇತ್ರವಾರು ಅಂಕಿ ಅಂಶಗಳ ವಿಶ್ಲೇಷಣೆಯು ಬಿಜೆಪಿಯ ನಿದ್ದೆ ಕೆಡಿಸುವಂತಹುದು. 2019ರಲ್ಲಿ ಎಸ್.ಪಿ. ಮತ್ತು ಬಿ.ಎಸ್.ಪಿ. ಒಟ್ಟಾಗಿ ಸ್ಪರ್ಧಿಸಿದರೆ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ 50ರಲ್ಲಿ ಬಿಜೆಪಿ ಸೋಲಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಅಖಿಲೇಶ್.-ಮಾಯಾವತಿ ಜೋಡಿ ಕನಿಷ್ಠ 57 ಸೀಟುಗಳನ್ನು ಗೆಲ್ಲಲಿದ್ದು, ಬಿಜೆಪಿ ಕೇವಲ 23ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಎರಡೂ ಪಕ್ಷಗಳು ಒಟ್ಟುಗೂಡಿ ಸ್ಪರ್ಧಿಸಿದರೆ ಏನಾದೀತೆಂಬ ಈ ಚಿತ್ರವನ್ನು ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಉಪಚುನಾವಣೆಗಳ ಫಲಿತಾಂಶಗಳು ಈಗಾಗಲೆ ಸಾರಿ ಹೇಳಿವೆ.
ರಾಜಕೀಯ ರಣತಂತ್ರ ಹೆಣೆಯುವಲ್ಲಿ ಈವರೆಗೆ ನಿಸ್ಸೀಮರೆನಿಸಿರುವ ಮೋದಿ-ಅಮಿತ್ ಶಾ ಜೋಡಿಗೆ ಈ ವಾಸ್ತವ ಗೊತ್ತು. ಅಖಿಲೇಶ್ ಚಿಕ್ಕಪ್ಪ ಶಿವಪಾಲ ಯಾದವ್ ಬಂಡೆದ್ದು ಹೊರಬಿದ್ದು ಹೊಸ ರಾಜಕೀಯ ವೇದಿಕೆ ನಿರ್ಮಿಸಲು ಹೊರಟಿದ್ದಾರೆ. ಅವರಿಗೆ ಬಿಜೆಪಿ ಕುಮ್ಮಕ್ಕು ನೀಡಿದೆ. ಆದರೆ ಅಖಿಲೇಶ್ ತಂದೆ ಮತ್ತು ಸಮಾಜವಾದಿ ಪಕ್ಷದ ಪಿತಾಮಹ ಮುಲಾಯಂ ಸಿಂಗ್ ಯಾದವ್ ಮಗನ ಪಾಳೆಯದಲ್ಲಿ ಕಾಣಿಸಿಕೊಂಡಿರುವುದು ಬಿಜೆಪಿಯ ಪಾಲಿಗೆ ಒಳ್ಳೆಯ ಸುದ್ದಿ ಅಲ್ಲ. ಮೋದಿಯವರು ಪುನಃ ಈಗಿನಂತೆ ಸರ್ವಶಕ್ತ ಪ್ರಧಾನಿ ಆಗಬೇಕಿದ್ದರೆ 2019ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಕನಿಷ್ಠ ಪಕ್ಷ 65-70 ಸೀಟುಗಳನ್ನಾದರೂ ಗೆಲ್ಲಬೇಕಿದೆ.
2014ರ ಲೋಕಸಭಾ ಚುನಾವಣೆಗಳಲ್ಲಿ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಗುಜರಾತಿನ ಒಟ್ಟು 80 ಸೀಟುಗಳ ಪೈಕಿ 78 ಸೀಟುಗಳನ್ನು ಬಿಜೆಪಿ ಗೆದ್ದಿತ್ತು. 2019ರ ಚುನಾವಣೆಗಳಲ್ಲಿ ಇದೇ ಬಂಪರ್ ಫಸಲು ಬಿಜೆಪಿ ಕೈ ಸೇರುವುದು ಬಹುತೇಕ ಅಸಾಧ್ಯ. ಮಹಾರಾಷ್ಟ್ರ ಮತ್ತು ಛತ್ತೀಸಗಢದ 59 ಸೀಟುಗಳ ಪೈಕಿ 51 ಸೀಟುಗಳನ್ನು ಬಿಜೆಪಿ ಗೆದ್ದಿತ್ತು. ಶಿವಸೇನೆ ಮುನಿಸಿನ ಹಿನ್ನೆಲೆಯಲ್ಲಿ ಇದೇ ಸಾಧನೆಯ ಪುನರಾವರ್ತನೆ ಅಸಾಧ್ಯ.

ಹೀಗಾಗಿಯೇ ಈಶಾನ್ಯ ಭಾರತ, ಒಡಿಶಾ, ಬಂಗಾಳ ಹಾಗೂ ಕೇರಳದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಸೀಟುಗಳನ್ನು ಗೆಲ್ಲಲು ಅಮಿತ್ ಶಾ ಎಲ್ಲ ಪ್ರಯತ್ನ ನಡೆಸಿದ್ದಾರೆ. ಆದರೆ ಒಡಿಶಾ ಮತ್ತು ಬಂಗಾಳದ ವಿನಾ ಉಳಿದ ರಾಜ್ಯಗಳಲ್ಲಿನ ಸೀಟುಗಳ ಸಂಖ್ಯೆ ಹೆಚ್ಚೇನಿಲ್ಲ. ಬಂಗಾಳ ಮತ್ತು ಕೇರಳದಲ್ಲಿ ದೊಡ್ಡ ಪ್ರಮಾಣದ ಗೆಲುವಿನ ನಿರೀಕ್ಷೆ ಖುದ್ದು ಬಿಜೆಪಿಗೇ ಇಲ್ಲ. ಬಿಹಾರದ 40 ಸೀಟುಗಳು ಮತ್ತು ತಮಿಳುನಾಡಿನ 39 ಸೀಟುಗಳ ಪೈಕಿ ಗರಿಷ್ಠ ಸೀಟುಗಳನ್ನು ಮಿತ್ರಪಕ್ಷಗಳ ಜೊತೆ ಸೇರಿ ಗೆಲ್ಲುವ ರಣತಂತ್ರ ಹೆಣೆಯುವ ಅನಿವಾರ್ಯ ಬಿಜೆಪಿಯದು.

ಬಿಜೆಪಿ ತನ್ನ ಮಿತ್ರಪಕ್ಷಗಳ ಜೊತೆಗೂಡಿ ಎಷ್ಟೇ ತಿಣುಕಿದರೂ ಉತ್ತರಪ್ರದೇಶದಲ್ಲಿ ಕನಿಷ್ಠ 65 ಸೀಟುಗಳನ್ನು ಗೆಲ್ಲದಿದ್ದರೆ ಪ್ರಧಾನಿ ಗದ್ದುಗೆ ಮೋದಿಯವರಿಂದ ದೂರ ಉಳಿಯಲಿದೆ. ಈ ಎಲ್ಲ ಕಾರಣಗಳಿಗಾಗಿ 2019ರ ಏಪ್ರಿಲ್ ತಿಂಗಳ ಹೊತ್ತಿಗೆ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳದಿದ್ದರೂ ಕನಿಷ್ಠ ಪಕ್ಷ ಆರಂಭ ಆದರೂ ಆಗಬೇಕಿದೆ.
ಹೀಗಾಗಬೇಕಿದ್ದರೆ ಸುಪ್ರೀಂ ಕೋರ್ಟ್ ತೀರ್ಪು ತ್ವರಿತವಾಗಿ ಹೊರಬೀಳಬೇಕಿದೆ. ತೀರ್ಪು ರಾಮಮಂದಿರದ ಪರವಾಗಿ ಹೊರಬಿದ್ದರೂ, ವಿರೋಧವಾಗಿ ಹೊರಬಿದ್ದರೂ ಅದರ ರಾಜಕೀಯ ಫಲಾನುಭವಿ ಭಾರತೀಯ ಜನತಾ ಪಕ್ಷವೇ. ಹೀಗಾಗಿ ಮೋದಿಯವರ ನಿಚ್ಚಲ ಗೆಲುವಿಗೆ ರಾಮಮಂದಿರ ನಿರ್ಮಾಣ ಪ್ರಮುಖ ಬೀಗದ ಕೈ ಆಗಲಿದೆ

Comments