ವಿಶೇಷ ಸುದ್ದಿ: ಭಾರತ ಮಾತೆಯ ವೀರಪುತ್ರ ಭಗತ್ ಸಿಂಗ್ ರವರಿಗೆ111ನೇ ಜನ್ಮ ಜಯಂತಿ..!!! ವೀರ ಪುತ್ರನ ವೀರಗಾಥೆಯನ್ನು ಒಮ್ಮೆ ಓದಿ ಸ್ಮರಿಸಿ...!!!

'ಮೇರಾ ರಂಗ್ ದೇ ಬಸಂತಿ ಚೋಲಾ..' ಎಂದು ಹಾಡು ಹಾಡುತ್ತಾ, ಎದೆಯುಬ್ಬಿಸಿ ಆ ಮೂವರು ಯುವಕರು ಗಲ್ಲುಗಂಬ ಏರಿದಾಗ ಇಡೀ ದೇಶ ಅವರೊಂದಿಗೆ 'ಇಂಕ್ವಿಲಾಬ್ ಜಿಂದಾಬಾದ್' ಎಂಬ ಘೋಷಣೆ ಕೂಗಿತ್ತು. ಭಾರತ ಮಾತೆಯ ದಾಸ್ಯದ ಸಂಕೋಲೆಗಳನ್ನು ತೊಡೆದು ಹಾಕಲು ಆ ಮೂವರು ಯುವಕರು ಗಲ್ಲು ಹಗ್ಗಕ್ಕೆ ಮುತ್ತಿಟ್ಟಾಗಲೂ ದೇಶ ಅದೇ ಘೋಷಣೆ ಮೊಳಗಿಸಿತ್ತು. 'ಇಂಕ್ವಿಲಾಬ್ ಜಿಂದಾಬಾದ್'. 1931 ಮಾರ್ಚ್ 31 ರಂದು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿದ ಆ ಮೂವರು ಮಹಾನ್ ಕ್ರಾಂತಿಕಾರಿಗಳ ಪೈಕಿ ಓರ್ವರಾದ ಭಗತ್ ಸಿಂಗ್ ಗೆ ಇಂದು 111ನೇ ಹುಟ್ಟುಹಬ್ಬ.
ಭಾರತದ ಕ್ರಾಂತಿಕಾರಿ ಚಳವಳಿಯ ಧ್ರುವತಾರೆ ಭಗತ್ ಸಿಂಗ್ ಅವರಿಗೆ ಇಂದು ಭರ್ತಿ 111 ವರ್ಷ. ಕೇವಲ ತಮ್ಮ 23ನೇ ವಯಸ್ಸಿನಲ್ಲೇ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಈ ಮಹಾನ್ ಸಮಾಜವಾದಿ ಕ್ರಾಂತಿಕಾರಿ, ಭಾರತದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದವರು. 1907, ಸೆ.28 ರಂದು ಪಂಜಾಬ್ ನ ಲ್ಯಾಲ್ ಪುರ್ ಜಿಲ್ಲೆಯ ಭಂಗಾ ಗ್ರಾಮದಲ್ಲಿ ಸರ್ದಾರ್ ಕಿಶನ್ ಸಿಂಗ್ ಸಂಧು ಮತ್ತು ವಿದ್ಯಾವತಿ ಅವರ ಹಿರಿಯ ಪುತ್ರನಾಗಿ ಭಗತ್ ಸಿಂಗ್ ಜನಿಸಿದರು. ಚಿಕ್ಕಂದಿನಿಂದಲೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡಿದ್ದ ಭಗತ್ ಸಿಂಗ್, ಯೌವನದಲ್ಲಿ ಚಂದ್ರಶೇಖರ್ ಆಜಾದ್ ಅವರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಸೇರಿ ಕ್ರಾಂತಿಕಾರಿ ಚಳವಳಿಯಲ್ಲಿ ಭಾಗವಹಿಸಿದರು. ಅಷ್ಟೇ ಅಲ್ಲ ಹೆಚ್‌ಆರ್‌ಎ ಅನ್ನು ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರು ನಾಮಕರಣ ಮಾಡಿದವರೂ ಭಗತ್ ಸಿಂಗ್ ಅವರೇ.
ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರ ಹತ್ಯೆಗೆ ಪ್ರತೀಕಾರವಾಗಿ ಸ್ಯಾಂಡರ್ಸ್ ಎಂಬ ಬ್ರಿಟೀಷ್ ಅಧಿಕಾರಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಗುಂಡಿಟ್ಟು ಹತ್ಯೆಗೈದ ಕ್ರಾಂತಿಕಾರಿಗಳಲ್ಲಿ ಪ್ರಮುಖರು ಭಗತ್ ಸಿಂಗ್, ಆಜಾದ್, ರಾಜಗುರು ಅಷ್ಟೇ ಅಲ್ಲದೇ 1928 ರಲ್ಲಿ ಬ್ರಿಟೀಷ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕಾರ್ಮಿಕ ಕಾನೂನನ್ನು ವಿರೋಧಿಸಿ ಭಗತ್ ಸಿಂಗ್ ಮತ್ತವರ ಸಂಗಡಿಗ ಭಟುಕೇಶ್ವರ್ ದತ್ ಸಂಸತ್ತಿನಲ್ಲಿ ಬಾಂಬ್ ಎಸೆದು ಶರಣಾದರು. ಅದರಂತೆ ಸುದೀರ್ಘ ವಿಚಾರಣೆ ನಡೆದು ಸ್ಯಾಂಡರ್ಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1931 ಮಾರ್ಚ್ 31 ರಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಆದರೆ ಈ ಮೂವರು ಯುವ ಕ್ರಾಂತಿಕಾರಿಗಳ ಆದರ್ಶ, ಅವರು ತೋರಿಸಿಕೊಟ್ಟ ದಾರಿ ಇಂದಿಗೂ ಕೋಟ್ಯಾಂತರ ಭಾರತೀಯರಿಗೆ ದಾರಿದೀಪವಾಗಿದ್ದು, ಭಗತ್ ಸಿಂಗ್ ಮತ್ತವರ ಸಂಗಡಿಗರನ್ನು ಭಾರತ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಭಗತ್ ಸಿಂಗ್ ಅವರ 111ನೇ ಜನ್ನ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಮಹಾನ್ ಕ್ರಾಂತಿಕಾರಿಯನ್ನು ನೆನೆದಿದ್ದಾರೆ. ಭಗತ್ ಸಿಂಗ್ ಅವರ ಆದರ್ಶ ಎಲ್ಲಾ ಕಾಲದಲ್ಲಿಯೂ ಭಾರತೀಯರಿಗೆ ದಾರಿದೀಪವಾಗಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಭಗತ್ ಸಿಂಗ್ ಜನ್ಮ ಜಯಮತಿಗೆ ಶುಭಾಷಯ ತಿಳಸಿದ್ದು, ಭಗತ್ ಸಿಂಗ್ ಈ ದೇಶ ಕಂಡ ಮಹಾನ್ ಕ್ರಾಂತಿಕಾರಿ ಎಂದು ಬಣ್ಣಿಸಿದ್ದಾರೆ.

ಭಗತ್ ಸಿಂಗ್ ಅಮರ್ ರಹೇ...ಇಂಕ್ವಿಲಾಬ್ ಜಿಂದಾಬಾದ್...

Comments