ಸ್ಪೋಟಕ ಸುದ್ದಿ: ಇಬ್ಬರು ಕಾಂಗ್ರೆಸಿಗರು ಬಿಜೆಪಿಗೆ...???

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆಗೆ ಶುಕ್ರವಾರ ಹೈವೋಲ್ಟೇಜ್‌ ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆಯಿದೆ. ಏಕೆಂದರೆ, ಹೈಡ್ರಾಮಾ ನಡುವೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವ ವೇಳೆಗೆ ಬಿಜೆಪಿ ಕೂಡ ಕಡೆ ಕ್ಷಣದಲ್ಲಿ ಭರ್ಜರಿಯಾಗಿ ಅಖಾಡಕ್ಕೆ ಇಳಿದಿರುವ ಲಕ್ಷಣವಿರುವ ಕಾರಣ ನಗರದ 19ನೇ ಮೇಯರ್‌ ಯಾರು ಎಂಬುದು ಚುನಾವಣೆ ನಂತರವೇ ನಿರ್ಧಾರವಾಗುವ ಸಾಧ್ಯತೆಯಿದೆ.
ಸತತ ನಾಲ್ಕನೇ ವರ್ಷವೂ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಕೂಟ ಕ್ರಮವಾಗಿ ಮೇಯರ್‌, ಉಪಮೇಯರ್‌ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿವೆ. ಆದರೆ, ಮೈತ್ರಿ ಪಕ್ಷಗಳ ಪ್ರಯತ್ನ ವಿಫಲಗೊಳಿಸಿ ಈ ಬಾರಿ ಬಿಬಿಎಂಪಿಯಲ್ಲಿ ತನ್ನ ಅಧಿಕಾರದ ಗದ್ದುಗೆ ಸ್ಥಾಪಿಸಲು ಬಿಜೆಪಿ ಹವಣಿಸುತ್ತಿದ್ದು, ಇಬ್ಬರು ಪಕ್ಷೇತರ ಸದಸ್ಯರನ್ನು ಹೈಜಾಕ್‌ ಮಾಡಿದೆ ಎಂದು ಹೇಳಲಾಗುತ್ತಿದೆ.
ಒಂದೆಡೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಯಿಂದಾಗಿ ಕಳೆದ ಎರಡು ದಿನದಿಂದ ಸಾಲು ಸಾಲು ಸಭೆ ನಡೆಸಿದರೂ ಮೇಯರ್‌ ಅಭ್ಯರ್ಥಿ ಅಂತಿಮಗೊಳಿಸಿ ಅಧಿಕೃತವಾಗಿ ಘೋಷಿಸುವಲ್ಲಿ ಸಾಧ್ಯವಾಗಿಲ್ಲ. ಮತ್ತೊಂದೆಡೆ ತಮ್ಮ ಬೆಂಬಲಕ್ಕಿದ್ದ ಇಬ್ಬರು ಪಕ್ಷೇತರರು ದಿಢೀರ್‌ ಕೈತಪ್ಪಿರುವುದರ ಜತೆಗೆ ಬಿಜೆಪಿ ಕೆಲ ಜೆಡಿಎಸ್‌ ಸದಸ್ಯರಿಗೂ ಗಾಳ ಹಾಕಿರುವ ಆತಂಕ ಕಾಂಗ್ರೆಸ್‌ ವಲಯದಲ್ಲಿ ಸೃಷ್ಟಿಯಾಗಿದೆ. ಇದರಿಂದ ಕೊನೆ ಕ್ಷಣದಲ್ಲಿ ಯಾವುದೇ ರಾಜಕೀಯ ಮೇಲಾಟಗಳು ನಡೆಯಬಹುದಾಗಿದ್ದು, ಬಿಬಿಎಂಪಿ ಚುನಾವಣೆ ತೀವ್ರ ಕುತೂಹಲ ಸೃಷ್ಟಿಸಿದೆ. ಕಾಂಗ್ರೆಸ್‌ನಲ್ಲಿ ಮೇಯರ್‌ ಆಗಲು ಗಂಗಾಂಬಿಕೆ ಹಾಗೂ ಸೌಮ್ಯಾ ಶಿವಕುಮಾರ್‌ ಮಧ್ಯೆ ಪೈಪೋಟಿಯಿದೆ. ಜೆಡಿಎಸ್‌ ತನ್ನ ಪಾಲಿನ ಉಪಮೇಯರ್‌ ಸ್ಥಾನಕ್ಕೆ ರಮೀಳಾ ಉಮಾಶಂಕರ್‌ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ.

Comments