ತನ್ನ ತಾಯಿಯ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಯುವ ಪೊಲೀಸ್ ಅಧಿಕಾರಿಯ ಫೋಟೋ ವೈರಲ್...!!!!

ನಮ್ಮ ಎಲ್ಲಾ ಯಶಸ್ಸುಗಳ ಹಿಂದೆ ನಮ್ಮ ಹೆತ್ತವರು ಮಾಡಿರುವ ಅಪರಿಮಿತ ತ್ಯಾಗಗಳಿರುತ್ತವೆ, ಇದಕ್ಕಾಗಿ ಅವರಿಗೆ ಸದಾ ಅಭಾರಿಯಾಗಿರುವುದು ಎಲ್ಲರ ಕರ್ತವ್ಯ. ಇದಕ್ಕೊಂದು ನಿದರ್ಶನವೆಂಬಂತೆ, ರಾಜ್ಯದ ಯುವ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಾಯಿಯ ಪಾದಕ್ಕೆ ನಮಿಸಿ ಅವರ ಆಶೀರ್ವಾದ ಕೋರುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆಯಲ್ಲದೆ ನೆಟ್ಟಿಗರನ್ನು ಭಾವಪರವಶರನ್ನಾಗಿಸಿದೆ.
ಕರ್ನಾಟಕ ರಾಜ್ಯ ಮೀಸಲು ಪಡೆಯ ಎಡಿಜಿಪಿ ಭಾಸ್ಕರ್ ರಾವ್ ಅವರು ಈ ಫೋಟೋ ಶೇರ್ ಮಾಡಿದವರು. ಅವರ ಪ್ರಕಾರ ಈ ಫೋಟೋ ಸಬ್-ಇನ್‍ಸ್ಪೆಕ್ಟರ್ ಒಬ್ಬರದ್ದಾಗಿದ್ದು ವಿಶೇಷ ಸಂದರ್ಭವೊಂದರಲ್ಲಿ ಅದನ್ನು ಕ್ಲಿಕ್ಕಿಸಲಾಗಿದೆ. "ತನ್ನ ಪಾಸಿಂಗ್ ಔಟ್ ಪರೇಡಿನಲ್ಲಿ ಭಾಗವಹಿಸಲು ಸಾಧ್ಯವಾಗದ ತನ್ನ ತಾಯಿಗೆ ಗೌರವವನ್ನು ಕೃತಜ್ಞತಾಪೂರ್ವಕವಾಗಿ ಸಮರ್ಪಿಸುತ್ತಿರುವ ಪುತ್ರ,'' ಎಂದು ಅವರು ಈ ಫೋಟೋಗೆ ವಿವರಣೆ ನೀಡಿದ್ದಾರೆ.

ಈ ಫೋಟೋವನ್ನು ಈಗಾಗಲೇ 17,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು ಎಲ್ಲರೂ ಈ ಯುವ ಅಧಿಕಾರಿಯನ್ನು ಹೊಗಳಿದ್ದಾರೆ. ಇದು ಒಂದು ಹೆಮ್ಮೆಯ ಸಂದರ್ಭವಾಗಿದೆ ಎಂದು ಕೆಲವರು ಬಣ್ಣಿಸಿದರೆ ಇನ್ನು ಕೆಲವರು ಹೆತ್ತವರು ತಮ್ಮ ಮಕ್ಕಳಿಗಾಗಿ ಮಾಡುವ ತ್ಯಾಗಗಳನ್ನು ನೆನಪಿಸಿಕೊಂಡಿದ್ದಾರೆ.

Comments